ಡಾ. ಸುಧಾ ಯಾದವ್
ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರು ಮತ್ತು ವಿಶ್ವವಿದ್ಯಾಲಯಗಳ ಕುಲಾಧಿಪತಿಗಳು

ಡಾ. ಸುಧಾ ಯಾದವ್ ಅವರು ಶಿಕ್ಷಣತಜ್ಞೆ, ಜನ ಸೇವಕಿ ಹಾಗೂ ಮಾಜಿ ಸಂಸತ್ ಸದಸ್ಯೆಯಾಗಿದ್ದು, ಅವರ ಜೀವನವು ಧೈರ್ಯ, ಛಲ, ಪ್ರಾಮಾಣಿಕತೆ ಮತ್ತು ರಾಷ್ಟ್ರದ ಬಗೆಗಿನ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಭಾರತೀಯ ತಂತ್ರಜ್ಞಾನ ಸಂಸ್ಥೆ, ರೂರ್ಕಿಯಿಂದ ರಸಾಯನಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ ಅವರು, ಶೈಕ್ಷಣಿಕ ಕ್ಷೇತ್ರದಲ್ಲಿನ ಉನ್ನತ ಸಾಧನೆ ಹಾಗೂ ಸಾರ್ವಜನಿಕ ಜೀವನದ ಅಪಾರ ಅನುಭವದೊಂದಿಗೆ ತಮ್ಮ ಸಾಂವಿಧಾನಿಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ.

ಡಾ. ಸುಧಾ ಯಾದವ್ ಅವರು 1965ರ ಅಕ್ಟೋಬರ್ 16ರಂದು ಹರಿಯಾಣದ ರೇವಾರಿ ಜಿಲ್ಲೆಯ ಮೊತ್ಲಾ ಕಲಾಂ ಗ್ರಾಮದಲ್ಲಿ ಜನಿಸಿದರು. ತಮ್ಮ ಜೀವನದ ಆರಂಭಿಕ ಹಂತದಿಂದಲೇ ದೃಢನಿಶ್ಚಯ, ಅಚಲ ಸಂಕಲ್ಪ, ಸ್ಥಿತಿಸ್ಥಾಪಕತ್ವ ಮತ್ತು ಕರ್ತವ್ಯನಿಷ್ಠೆಯನ್ನು ಅಳವಡಿಸಿಕೊಂಡ ಅವರು, ಶೈಕ್ಷಣಿಕ ಹಿನ್ನೆಲೆಯಿಂದ ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿ, ರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿದರು.

ಗಡಿ ಭದ್ರತಾ ಪಡೆಯಲ್ಲಿ ಡೆಪ್ಯೂಟಿ ಕಮಾಂಡೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದ ಅವರ ಪತಿ ಶ್ರೀ ಸುಖಬೀರ್ ಸಿಂಗ್ ಯಾದವ್ ಅವರು 1999ರ ಕಾರ್ಗಿಲ್ ಯುದ್ಧದಲ್ಲಿ ಪ್ರಾಣಾರ್ಪಣೆ ಮಾಡಿದ ಪ್ರಥಮ ಹುತಾತ್ಮರಾಗಿದ್ದು, ಅವರ ಅತ್ಯುನ್ನತ ತ್ಯಾಗವು ಡಾ. ಸುಧಾ ಯಾದವ್ ಅವರ ಜೀವನದ ಮೇಲೆ ಆಳವಾದ ಪ್ರಭಾವ ಬೀರಿತು. ವೈಯಕ್ತಿಕ ಜೀವನದ ಈ ಸಂಕಷ್ಟವನ್ನು ಸಾರ್ವಜನಿಕ ಸೇವೆಯ ಸಂಕಲ್ಪವಾಗಿ ಪರಿವರ್ತಿಸಿಕೊಂಡ ಅವರು, ರಾಷ್ಟ್ರ ಹಾಗೂ ಜನರ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡರು.

ಡಾ. ಸುಧಾ ಯಾದವ್ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಧ್ಯಪ್ರದೇಶದ ಭೋಪಾಲ್‌ನಲ್ಲಿರುವ ಬಿಎಚ್‌ಇಎಲ್‌ನ ಸರಸ್ವತಿ ಶಿಶು ಮಂದಿರದಲ್ಲಿ ಹಾಗೂ ಮುಂದಿನ ಶಾಲಾ ಶಿಕ್ಷಣವನ್ನು ಹರಿದ್ವಾರದ ಬಿಎಚ್‌ಇಎಲ್‌ನ ವಿದ್ಯಾ ಮಂದಿರದಲ್ಲಿ ಪೂರ್ಣಗೊಳಿಸಿದರು. ಅವರು ರಸಾಯನಶಾಸ್ತ್ರದಲ್ಲಿ ಎಂ.ಎಸ್ಸಿ. ಪದವಿ ಹಾಗೂ ರೂರ್ಕಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯಿಂದ ರಸಾಯನಶಾಸ್ತ್ರದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ರಾಷ್ಟ್ರಪತಿಗಳ ಗೈಡ್ ಪ್ರಶಸ್ತಿಗೆ ಭಾಜನರಾಗಿರುವ ಅವರು, ಮಲೇಷ್ಯಾದಲ್ಲಿ ನಡೆದ ಗರ್ಲ್ಸ್ ಗೈಡ್ ಏಷ್ಯಾ–ಪೆಸಿಫಿಕ್ ಜಂಬೊರಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ಡಾ. ಸುಧಾ ಯಾದವ್ ಅವರು 1999ರಲ್ಲಿ ಹರಿಯಾಣದ ಮಹೇಂದ್ರಗಢ ಲೋಕಸಭಾ ಕ್ಷೇತ್ರದಿಂದ 13ನೇ ಲೋಕಸಭೆಗೆ ಆಯ್ಕೆಯಾಗಿ, 2004ರವರೆಗೆ ಸಂಸತ್ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ. ಈ ಅವಧಿಯಲ್ಲಿ ಅವರು ರಕ್ಷಣಾ ಸ್ಥಾಯಿ ಸಮಿತಿ, ಮಹಿಳಾ ಸಬಲೀಕರಣ ಸಮಿತಿ, ಸಂವಹನ ಸಚಿವಾಲಯದ ಸಮಾಲೋಚನಾ ಸಮಿತಿ ಹಾಗೂ ಸಂಸತ್ತಿನ ಅಧಿಕೃತ ಭಾಷಾ ಸಮಿತಿಯೂ ಸೇರಿದಂತೆ ಹಲವು ಪ್ರಮುಖ ಸಮಿತಿಗಳಲ್ಲಿ ಕಾರ್ಯನಿರ್ವಹಿಸಿದರು. ಅಲ್ಲದೆ, ತಂಪು ಪಾನೀಯಗಳು, ಹಣ್ಣಿನ ರಸಗಳು ಮತ್ತು ಇತರ ಪಾನೀಯಗಳಲ್ಲಿನ ಕೀಟನಾಶಕಗಳ ಅವಶೇಷಗಳು ಹಾಗೂ ಸುರಕ್ಷತಾ ಮಾನದಂಡಗಳ ಕುರಿತು ರಚಿಸಲಾಗಿದ್ದ ಮಹತ್ವದ ಜಂಟಿ ಸಂಸದೀಯ ಸಮಿತಿಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಗ್ರಾಮೀಣಾಭಿವೃದ್ಧಿ, ಕುಡಿಯುವ ನೀರು, ಹೆಣ್ಣುಮಕ್ಕಳ ಶಿಕ್ಷಣ, ನೈರ್ಮಲ್ಯ, ಆರೋಗ್ಯ ಸೇವೆ, ಉದ್ಯೋಗ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ಅವರು ವಿಶೇಷ ಆದ್ಯತೆ ನೀಡಿದ್ದಾರೆ.

ತರುವಾಯ, ಅವರು ಭಾರತೀಯ ಜನತಾ ಪಕ್ಷದಲ್ಲಿ ಹಲವು ಪ್ರಮುಖ ಸಾಂಸ್ಥಿಕ ಜವಾಬ್ದಾರಿಗಳನ್ನು ನಿರ್ವಹಿಸಿದರು. 2004–2005ರಲ್ಲಿ ಹರಿಯಾಣ ರಾಜ್ಯ ಕಾರ್ಯದರ್ಶಿಯಾಗಿ, 2005–2006ರಲ್ಲಿ ಹರಿಯಾಣ ರಾಜ್ಯ ವಕ್ತಾರರಾಗಿ, 2009–2012ರಲ್ಲಿ ಹರಿಯಾಣದ ಪ್ರಶಿಕ್ಷಣ ಪ್ರಮುಖರಾಗಿ ಹಾಗೂ 2009–2013ರಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆಯಾಗಿ ಸೇವೆ ಸಲ್ಲಿಸಿದರು. 2006–2009ರ ಅವಧಿಯಲ್ಲಿ ಹಾಗೂ 2013–2021ರ ಅವಧಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. 2015–2019ರ ಅವಧಿಯಲ್ಲಿ ಪಕ್ಷದ ಇತರ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಉಸ್ತುವಾರಿಯಾಗಿಯೂ ಜವಾಬ್ದಾರಿ ನಿರ್ವಹಿಸಿದರು. 2019ರಿಂದ 2022ರವರೆಗೆ ಅವರು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆಯಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ.

2022ರ ಆಗಸ್ಟ್ ನಲ್ಲಿ, ಬಿಜೆಪಿಯ ಅತ್ಯುನ್ನತ ನಿರ್ಧಾರ ಕೈಗೊಳ್ಳುವ ಸಂಸ್ಥೆಯಾದ ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ ಸಮಿತಿಗೆ ಇವರನ್ನು ನೇಮಕ ಮಾಡಲಾಯಿತು. ಅವರ ವೃತ್ತಿಜೀವನವು ಪ್ರಜಾಸತ್ತಾತ್ಮಕ ಸಂಸ್ಥೆಗಳ ಕಾರ್ಯಚಟುವಟಿಕೆಗಳು, ಸಾಮಾಜಿಕ ಪ್ರಾತಿನಿಧ್ಯ ಮತ್ತು ಸಾರ್ವಜನಿಕ ಕಲ್ಯಾಣದ ಕ್ಷೇತ್ರಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವುದನ್ನು ಪ್ರತಿಬಿಂಬಿಸುತ್ತದೆ.

ಸಂಸತ್ ಸದಸ್ಯೆಯಾಗಿದ್ದ ಅವಧಿಯಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಿದ ಅವರು ಶಾಲೆಗಳ ಸುಧಾರಣೆಗಾಗಿ ಹಲವು ಯೋಜನೆಗಳನ್ನು ಯಶಸ್ವಿಯಾಗಿ ಕೈಗೊಂಡರು. ಮಹೇಂದ್ರಗಢದ 95 ಬಾಲಕಿಯರ ಶಾಲೆಗಳಲ್ಲಿ ಹಾಗೂ ರೇವಾರಿಯ 48 ಬಾಲಕಿಯರ ಶಾಲೆಗಳಲ್ಲಿ ಶೌಚಾಲಯ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ತಮ್ಮ ಲೋಕಸಭಾ ಕ್ಷೇತ್ರದ ಒಟ್ಟು 1,246 ಗ್ರಾಮಗಳ ಪೈಕಿ 1,158 ಗ್ರಾಮಗಳಿಗೆ ಖುದ್ದಾಗಿ ಭೇಟಿ ನೀಡಿದರು. ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಬಿಡುಗಡೆಯಾದ ನಿಧಿಯನ್ನು ಶೇ. 100ರಷ್ಟು ಸಂಪೂರ್ಣವಾಗಿ ಬಳಸಿರುವುದಾಗಿ ವರದಿ ಮಾಡಿದರು. ದಾಖಲೆಗಳ ಪ್ರಕಾರ, ಲೋಕಸಭೆಯ ಅಧಿವೇಶನಗಳಿಗೆ ಅವರ ಹಾಜರಾತಿ ಶೇ. 95 ರಷ್ಟಿತ್ತು. 

ಅವರ ಅಭಿವೃದ್ಧಿ ಕಾರ್ಯಗಳ ಭಾಗವಾಗಿ, ಗುರುಗ್ರಾಮದಲ್ಲಿ ನೌಕರರ ರಾಜ್ಯ ವಿಮಾ ಆಸ್ಪತ್ರೆ ಸ್ಥಾಪನೆಗೆ ಅನುಮೋದನೆ ದೊರಕಿಸಲು ಮತ್ತು ಭವಿಷ್ಯ ನಿಧಿ ಕಚೇರಿ ಸ್ಥಾಪನೆಗೆ ಕ್ರಮ ಕೈಗೊಳ್ಳಲು ಶ್ರಮಿಸಿದರು. ರೈಲ್ವೆ ಸೌಲಭ್ಯಗಳ ಸುಧಾರಣೆಗಾಗಿ ಧ್ವನಿ ಎತ್ತುವುದರ ಜೊತೆಗೆ, ರೇವಾರಿಯಲ್ಲಿ ಮೇಲ್ಸೇತುವೆ ನಿರ್ಮಾಣಕ್ಕಾಗಿ ವಿಶೇಷ ಆಸಕ್ತಿ ವಹಿಸಿ ಶ್ರಮಿಸಿದ್ದರು. ರೈತರು ಮತ್ತು ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದರು. ಅಲ್ಲದೆ, ಶಾಲೆಗಳು, ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸುವ ಪರವಾಗಿಯೂ ಪ್ರತಿಪಾದಿಸಿದರು.

ಡಾ. ಸುಧಾ ಯಾದವ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಅವರ ಪುತ್ರಿ ಸೌಮ್ಯ ಯಾದವ್ ಅವರು ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಹಾಗೂ ಐಐಟಿ ದೆಹಲಿಯಿಂದ ಬಿ.ಟೆಕ್. ಪದವಿ ಪಡೆದಿದ್ದಾರೆ. ಅವರ ಪುತ್ರ ಸಿದ್ಧಾರ್ಥ್ ಯಾದವ್ ಅವರು ದೆಹಲಿ ವಿಶ್ವವಿದ್ಯಾಲಯದಿಂದ ಎಲ್‌ಎಲ್.ಬಿ. ಮತ್ತು ಎಲ್‌ಎಲ್.ಎಂ. ಪದವಿಗಳನ್ನು, ಲಂಡನ್‌ನ ಯೂನಿವರ್ಸಿಟಿ ಕಾಲೇಜ್ ಲಂಡನ್‌ನಿಂದ ಸಾರ್ವಜನಿಕ ನೀತಿಯಲ್ಲಿ ಎಂ.ಎಸ್ಸಿ. ಪದವಿಯನ್ನು ಹಾಗೂ ದೆಹಲಿ ವಿಶ್ವವಿದ್ಯಾಲಯದ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ನಿಂದ ಬಿ.ಕಾಂ. (ಆನರ್ಸ್) ಪದವಿಯನ್ನು ಪಡೆದಿದ್ದಾರೆ. ಅವರ ಶೈಕ್ಷಣಿಕ ಸಾಧನೆಗಳು ಕಲಿಕೆ, ಪರಿಶ್ರಮ ಮತ್ತು ವೈಯಕ್ತಿಕ ಜವಾಬ್ದಾರಿಗೆ ಇವರ ಕುಟುಂಬ ನೀಡುವ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸುತ್ತವೆ.

ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು 2026ರ ಅಕ್ಟೋಬರ್ 12ರಂದು ಡಾ. ಸುಧಾ ಯಾದವ್ ಅವರನ್ನು ಕರ್ನಾಟಕದ 20ನೇ ರಾಜ್ಯಪಾಲರನ್ನಾಗಿ ನೇಮಕ ಮಾಡಿದರು. ಅವರು 2026ರ ಅಕ್ಟೋಬರ್ 16ರಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿದರು.

ಡಾ. ಸುಧಾ ಯಾದವ್ ಅವರು “ಕಾಯಕವೇ ಕೈಲಾಸ” ಎಂಬ ತತ್ವದಲ್ಲಿ ದೃಢವಾದ ನಂಬಿಕೆಯನ್ನು ಹೊಂದಿದ್ದಾರೆ. ಅಂದರೆ, ಕಾಯಕವೇ ಆರಾಧನೆ ಎಂಬ ಭಾವನೆಯೊಂದಿಗೆ, ಸ್ವಾರ್ಥವಿಲ್ಲದ ಕರ್ಮದ ತತ್ವವನ್ನು ಅನುಸರಿಸಿ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಿಸ್ವಾರ್ಥತೆ ಮತ್ತು ಸಮರ್ಪಣಾಭಾವದಿಂದ ಪ್ರತಿಯೊಂದು ಕರ್ತವ್ಯವನ್ನೂ ನಿರ್ವಹಿಸಬೇಕು ಎಂಬುದು ಅವರ ನಿಲುವಾಗಿದೆ.

ಶೈಕ್ಷಣಿಕ ಸಾಧನೆ ಮತ್ತು ವೈಯಕ್ತಿಕ ತ್ಯಾಗದಿಂದ ಆರಂಭಗೊಂಡು, ಸಂಸದೀಯ ನಾಯಕತ್ವದ ಮೂಲಕ ಸಾಂವಿಧಾನಿಕ ಜವಾಬ್ದಾರಿಯವರೆಗೆ ಸಾಗಿರುವ ಡಾ. ಸುಧಾ ಯಾದವ್ ಅವರ ಜೀವನಯಾನವು ಪ್ರಾಮಾಣಿಕತೆ ಮತ್ತು ಸಾರ್ವಜನಿಕ ಹಿತದ ಬಗೆಗಿನ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ. ಅವರ ಜೀವನವು ಶಿಕ್ಷಣ, ನಿಸ್ವಾರ್ಥ ಸೇವೆ ಮತ್ತು ರಾಷ್ಟ್ರದ ಬಗೆಗಿನ ಬದ್ಧತೆಯ ಮೌಲ್ಯಗಳಿಗೆ ಸಾಕ್ಷಿಯಾಗಿದೆ. ಕರ್ನಾಟಕದ ರಾಜ್ಯಪಾಲರಾಗಿ, ಕರ್ತವ್ಯನಿಷ್ಠೆ, ನೈತಿಕ ಮೌಲ್ಯಗಳು ಹಾಗೂ ಸಾಂವಿಧಾನಿಕ ತತ್ವಗಳು ಅವರ ಕಾರ್ಯನಿರ್ವಹಣೆಗೆ ಮಾರ್ಗದರ್ಶಕವಾಗಿವೆ.

Scroll to Top